ಮೆನೀಯರನ ರೋಗ - 
ಪದೇ ಪದೇ ಬರುವ ತಲೆಸುತ್ತು, ಓಕರಿಕೆ ವಾಂತಿ, ಕರ್ಣಶಬ್ದದ ಭಾವನೆ (ಗುಂಯ್‍ಗುಟ್ಟುವುದು), ಕ್ರಮೇಣ ಕಿವುಡು - ಈ ಲಕ್ಷಣಕೂಟವಿರುವ ಒಂದು ರೋಗ (ಮೆನಿಯರ್ಸ್ ಸಿಂಡ್ರೋಮ್). ದೇಹದ ಸಮತೋಲನೆಯ ಯಾಂತ್ರಿಕ ವ್ಯವಸ್ಥೆ ಮತ್ತು ಶ್ರವಣ ಸಾಮಥ್ರ್ಯದ ಊನಗಳು ಒಳ್ಗಿವಿಯ ಹಜಾರ ಮತ್ತು ಕರ್ಣಶಂಖ ಎರಡು ಭಾಗಗಳಲ್ಲಿಯೂ ರೋಗಗತಿಯನ್ನು ಸೂಚಿಸುತ್ತವೆ. ಮೆನೀಯರನ ರೋಗದಿಂದ ಸತ್ತವರ ಪರೀಕ್ಷೆಗಳಿಂದ ಕಂಡುಬರುವ ಕರ್ಣಶಂಖನಾಳ ಉಬ್ಬಿರುವ ಸ್ಥಿತಿ ಮತ್ತು ಒಳಗಿನ ಸಂಕೀರ್ಣ ಕುಹರದಲ್ಲಿ ದ್ರವಸಮತೋಲನೆ ಏರು ಪೇರಾಗಿರುವುದು - ಇವುಗಳಿಂದ ಈ ರೋಗ ಉಂಟಾಗುವುದೆಂದು ಹೇಳಲಾಗಿದೆ. ಔಷಧಗಳಿಗೆ ಜಗ್ಗದ ರೋಗವಿದ್ದಾಗ ಶಸ್ತ್ರವೈದ್ಯದಿಂದ ಮಿದುಳು ಬುರುಡೆಯಲ್ಲಿ ಒಳಗಿವಿ ಹಜಾರಕ್ಕೆ ಪೂರೈಕೆ ಆಗುವ ಭಾಗವನ್ನು ಕತ್ತರಿಸುವುದು, ಒಳಗಿವಿ ಸಂಕೀರ್ಣಕುಹರವನ್ನು ನಾಶಪಡಿಸುವುದು ಅಥವಾ ಲೇಸರ್ ಕಿರಣದಿಂದ ಒಳಗಿವಿ ಹಜಾರದ ನರಾತ್ಯಾಂಗಗಳನ್ನು ನಾಶಮಾಡುವುದು ಚಿಕಿತ್ಸಾಕ್ರಮ.  ಸಂಕೀರ್ಣಕುಹರವನ್ನು ತೆರೆಯುವುದರಿಂದ ಪ್ರಾಣಿಗಳಲ್ಲಾಗುವ ಪರಿಣಾಮಗಳಿಗಿಂತ ಭಿನ್ನವಾದವು ಮನುಷ್ಯನಲ್ಲಿ ಕಂಡುಬರುತ್ತವೆ. ಈ ವ್ಯತ್ಯಾಸಕ್ಕೆ ಕಾರಣ ಶಸ್ತ್ರವೈದ್ಯಕ್ಕಿಂತ ಮುಂಚೆಯೇ ರೋಗದಿಂದ ಮನುಷ್ಯನಲ್ಲಿ ಸಮತೋಲನ ವ್ಯವಸ್ಥೆ ತೀರ ಕೆಟ್ಟಿರುವುದು. ಸಹಜಸ್ಥಿತಿಯ ಪ್ರಾಣಿಯಲ್ಲಿ ಒಂದು ಪಕ್ಕದಲ್ಲಿ ಸಂಕೀರ್ಣ ಕುಹರವನ್ನು ನಾಶಪಡಿಸುವುದರ ಫಲ ಸರಿಯಾಗಿರುವ ಇನ್ನೊಂದು ಕಡೆಯ ಒಳಗಿವಿಯ ನಡವೆಯನ್ನು ಹಜಾರ ಪ್ರೇರಿಸುವುದರ ಫಲದಂತಿರುತ್ತದೆ. ನಾಶಪಡಿಸಿದ ಕಡೆಗೆ ಕಣ್ಣಾಲಿಗಳು ನಿಧಾನವಾಗಿ ಹೊರಳುತ್ತಿರುತ್ತವೆ ಮತ್ತು ಆ ಕಡೆಯ ಮಡಿಸುವ ಪೇಶಿಗಳು ಸೆಟೆದುಕೊಂಡಿರುತ್ತವೆ; ನಾಶಪಡಿಸಿದ ಕಡೆಯ ನೀಡುವ ಪೇಶಿಗಳ ಬಿಗುವು ಹೆಚ್ಚಿರುತ್ತದೆ.

	ಸ್ಟ್ರೆಪ-ಟೊಮೈಸಿನಿನ್ನಂಥ ವಿಷಮಯ ಪದಾರ್ಥಗಳಿಂದಲೂ ಒಳಗಿವಿ ಹಜಾರದ ಕಾರ್ಯ ಸ್ಥಗಿತವಾಗಬಹುದು. ಎರಡು ಗ್ರಾಮ್ ಅಥವಾ ಹೆಚ್ಚು ಸ್ಟ್ರೆಪ್ಟೊಮೈಸಿನನ್ನು ದಿನವೂ ವಾರಗಳ ಪರ್ಯಂತ ಚುಚ್ಚುತ್ತಿದ್ದರೆ ಒಳಗಿವಿ ರೋಗಚಿಹ್ನೆಗಳು ಕಾಣಿಸುವ ಪ್ರಮೇಯ ಹೆಚ್ಚು. ಪ್ರಾಣಿಗಳ ಮೇಲಿನ ಪ್ರಾಯೋಗಿಕ ಅಧ್ಯಯನಗಳಿಂದ ಪರಿಧಿನರಗಳ ಅಂತ್ಯಾಂಗಗಳ ಮೇಲೆ ನೇರ ಪರಿಣಾಮವಾಗುವುದು ಕಾಣಿಸುತ್ತದೆ. ಆದರೆ ಮನುಷ್ಯನಲ್ಲಿ ಮುಂದಿರುವ ಕರ್ಣಶಂಖದ ಗುಂಬದ ಮೇಲೆ ಪರಿಣಾಮವಿರುವುದೆಂದು ಕೆಲವರ ಮತ. ಸ್ಟ್ರೆಪ್ಟೊಮೈಸಿನ್ ಚುಚ್ಚುಮದ್ದಿನಿಂದ ಸಾಮಾನ್ಯವಾಗಿ ದ್ವಿಪಾಶ್ರ್ವ ಪರಿಣಾಮವಾಗುತ್ತದೆ. ಔಷಧ ಪ್ರಯೋಗವನ್ನು ಸಾಕಷ್ಟು ಬೇಗನೆ ನಿಲ್ಲಿಸಿದಷ್ಟೂ ಒಳ್ಳೆಯ ಪರಿಣಾಮ ಉಂಟುಮಾಡಲು ಸಾಧ್ಯ. ಶ್ರವಣಸಾಮಥ್ರ್ಯ ನಷ್ಟದ ಪುರಾವೆ ಸಿಗುವ ಮೊದಲೇ ಒಳಗಿವಿ ಹಜಾರದ ಕಾರ್ಯಕ್ರಮ ಕೆಟ್ಟಿರುತ್ತದೆ. ಎತ್ತರದ ಶ್ರುತಿಗಳಿಗೆ ಕಿವುಡಾಗುವುದರಿಂದ ಮೊದಲಲ್ಲಿ ಕರ್ಣಶಂಖಕ್ಕಾದ ಹಾನಿ ತಿಳಿಯದಿರಬಹುದು. ಏಕೆಂದರೆ ಮಾತಾಡುವುದು ಕೇಳಿಸುತ್ತದೆ. ವಿಪರೀತ ತಲೆಸುತ್ತು, ವಾಂತಿ, ಸುಸ್ತು, ಕಿವಿಮೊರೆತ, ಹೆಚ್ಚುವ ಕಿವುಡು ಇವು ಒಟ್ಟಾಗಿರುವುವು. ಗಂಡಸರಿಗೆ ಬರುವುದು ಜಾಸ್ತಿ. ಮಧ್ಯವಯಸ್ಸಿಗೆ (ಅಂದಾಜು 45 ವರ್ಷ) ಬಂದು ಹಲವು ವರ್ಷ ಕಾಡಿ ಕೊನೆಗೆ ಕಡಿಮೆ ಆಗಬಹುದು. ತಜ್ಞ ವೈದ್ಯರ ಸಲಹೆ ಪಡೆದು ಚಿಕಿತ್ಸೆ ಮಾಡುವುದು ಯೋಗ್ಯ.	
(ಎಂ.ಡಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ